ಕಾವ್ಯ ವಾಚನ ಕಲೆ - ಡಾ॥ ಅರ್ಚನಾ ಭಟ್


ಮಾನವನಿಗೆ ಅಧಿಕವಾದ ಸಂತೋಷವನ್ನು ಕೊಡಬಲ್ಲ ವಿದ್ಯೆ ಕಲೆ. ಇದು ಜ್ಞಾನ ಮಾರ್ಗ. ನಮ್ಮ ಪೂರ್ವಿಕರು, ವಿದ್ಯೆಗಳು ಮೂವತ್ತೆರಡು ಮತ್ತು ಕಲೆಗಳು ಅರವತ್ತನಾಲ್ಕು ಎಂದು ಗುರುತಿಸಿಕೊಂಡಿದ್ದರು. ಅರವತ್ತನಾಲ್ಕು ಕಲೆಗಳಲ್ಲಿ ಪುಸ್ತಕ ವಾಚನ ಕಲೆ ಕೂಡ ಒಂದು. ತನ್ನ ಸುಖ ಸಾಧನೆಗಳಿಗೆ ಕಾರಣವಾದ ಯಾವುದೇ ವಿದ್ಯೆಯನ್ನು, ಮನುಷ್ಯ ಕಲೆ ಎಂದು ಕರೆದಿರುವುದು ನಮಗೆ ಕಂಡುಬರುತ್ತದೆ. ಅದರೆ ಅವನು ಆ ಕಲೆಯನ್ನು ಸದುಪಯೋಗ ಮಾಡಿದಾಗ ಮಾತ್ರ ಅದು ಲೋಕಕ್ಕೆ ಬೆಳಕಾಗುತ್ತದೆ ಎಂಬುದು ಅನುಭವದ ಮಾತು.

ಪುಸ್ತಕ ವಾಚನದಲ್ಲಿ ಗದ್ಯ – ಪದ್ಯ, ಇವೆರಡನ್ನೂ ಒಳಗೊಂಡಿರುತ್ತದೆ. ಇದರಲ್ಲೂ ಕಣ್ಣಿಗೆ ಪ್ರಾಧಾನ್ಯತೆ ಇರುವ ದೃಶ್ಯ ಕಾವ್ಯ ಹಾಗೂ ಕಿವಿಗೆ ಪ್ರಾಧಾನ್ಯತೆ ಇರುವ ಶ್ರವ್ಯ ಕಾವ್ಯ ಎಂಬ ಎರಡು ವಿಭಾಗಗಳನ್ನು ಕಾಣಬಹುದು.

ಗಮಕ ಒಂದು ಶ್ರವ್ಯ ಕಾವ್ಯ. ಕಾವ್ಯಗಳನ್ನು ಗಂಭೀರವಾಗಿಯೂ, ರಾಗವಾಗಿಯೂ ಅರ್ಥಪೂರ್ಣವಾಗಿಯೂ ಓದುವುದು ಗಮಕ ಕಲೆ. ಗಮಕ ಪದ, ದೇವ ಭಾಷೆ ಸಂಸ್ಕೃತದ್ದು. ಈ ಶಬ್ದಕ್ಕೆ ಗತಿ, ನಡೆ, ರೀತಿ ಮುಂತಾದ ಅರ್ಥಗಳಿವೆ. ಸಂಗೀತ ಶಾಸ್ತ್ರ, ಗಮಕಕ್ಕೆ ಸ್ವರ ವಿನ್ಯಾಸ ಕ್ರಮ, ಸ್ವರ ವಿಶೇಷ ಯಾ ಧ್ವನಿ ವಿಶೇಷ ಎಂದು ಕರೆದಿದೆ.

ಈ ಗಮಕ ಕಲೆಯ ಉಗಮ, ನಮ್ಮ ದೇಶದ ಮಹಾ ಕಾವ್ಯ ರಾಮಾಯಣದೊಂದಿಗೇ ಆಯಿತು ಎನ್ನಬಹುದಾಗಿದೆ. ವಾಲ್ಮೀಕಿ ಮುನಿಗಳಿಂದ ಕಲಿತ ರಾಮಾಯಣದ ಪೂರ್ಣ ಪಾಠವನ್ನು, ರಾಮನ ಪುತ್ರರಾದ ಲವ – ಕುಶರು ರಾಗಬದ್ಧವಾಗಿ ಹಾಡಿದಂದೇ ಪ್ರಪ್ರಥಮ ಗಮಕಿಗಳೆನಿಸಿಕೊಂಡರು. ಗಮಕಿಯೆಂದರೆ ಲಿಪಿ ಓದುವವ, ವಾಚಕ, ವಾಗ್ಮಿ ಎಂಬ ನಾನಾ ಅರ್ಥಗಳಿವೆ. ಗಮಕಿ, ಸಾಹಿತ್ಯದ ಸೂಕ್ಷ್ಮವಾದ ಪರಿಶೀಲನೆ, ವ್ಯಾಸಂಗ ಮತ್ತು ಪ್ರಯೋಗಗಳಿಂದ ಪದ್ಯಗಳನ್ನು ಹಾಡಬೇಕಾಗುತ್ತದೆ ಹಾಗೂ ಸಂಗೀತ ಸಾಹಿತ್ಯಗಳೆರಡರ ಜ್ಞಾನ ಗಮಕಿಗಿರಬೇಕಾಗುತ್ತದೆ. ಅವರು ಸಂಗೀತದ ದಶವಿಧ ಗಮಕಗಳನ್ನು ಅರಿತು ಕಾವ್ಯ ಗಾಯನದಲ್ಲಿ ಬಳಸಬಹುದು. ಆದರೇ ಸಾಹಿತ್ಯದ ಗಮಕವನ್ನು ಅರಿತು ಹಾಡಬೇಕಾಗುತ್ತದೆ. ಅಂದರೆ, ಪದಗಳ ಏರಿಳಿತ, ಪದ್ಯಕ್ಕೆ ಬೇಕಾದ ಮಂದ, ತೀವ್ರ, ಕುಣಿತ, ಕಂಪನ, ಬಿರುಸು ಸಮ ವಿಷಮಗಳಂತಹ ವಿಚಾರ, ಉಪಯೋಗಿಸುವ ರಾಗಗಳು, ರಸ ನಿರ್ಣಯ, ಪದ್ಯ ಆಯ್ಕೆ ಮಾಡುವ ಶಕ್ತಿಯೂ ಗಮಕಿಗೆ ಇರಬೇಕು.

ಪದ್ಯ ವಾಚನಕ್ಕೆ ಒಗ್ಗುವ ಕಾವ್ಯ ಭಾಗವನ್ನು ಚಂಪೂ ಕಾವ್ಯದಿಂದಲೋ, ಷಟ್ಪದಿ ಕಾವ್ಯದಿಂದಲೋ ಆರಿಸಿಕೊಳ್ಳಬಹುದು. ಅಥವಾ ದ್ವಿಪದಿ, ತ್ರಿಪದಿ, ಚೌಪದಿ, ಸಾಂಗತ್ಯ, ಸೀಸ, ವಿವಿಧ ರಗಳೆಗಳನ್ನ ಬಳಸಬಹುದು. ಗದ್ಯ ಶೈಲಿಯಲ್ಲೇ ವಾಚನ ಮಾಡಬೇಕಾದ ಬಿಟ್ಟು ಆಧುನಿಕ ಕವಿತೆಗಳನ್ನೂ ಹಾಡಬಹುದು. ಯಾವುದೇ ಬಗೆಯ ರಚನೆಗಳನ್ನೂ ಜನರಿಗೆ ನೇರವಾಗಿ ತಲುಪಿಸುವ ಶಕ್ತಿಯುಳ್ಳ, ಸಾಹಿತ್ಯ ಸಂಗೀತಗಳ ಸಮ ಸಮನ್ವಯತೆ ಇರುವ ವಿಶೇಷ ಕಲೆ ಗಮಕ. ಗಮಕಿ ಶ್ರೋತೃ ಹಾಗೂ ಕವಿಯ ನಡುವಿನ ಕೊಂಡಿಯಾಗಿ ಕಾವ್ಯ ಪರಂಪರೆಯ ಉಳಿವಿಗೆ ತನ್ನ ಕೊಡುಗೆ ನೀಡುತ್ತಿರುತ್ತಾರೆ.

ಕರ್ನಾಟಕದ ಕೆಲ ಪ್ರಸಿದ್ದ ಗಮಕಿಗಳನ್ನು ನೆನೆಪಿಸಿಕೊಳ್ಳುವುದು ಹೆಮ್ಮೆಯ ವಿಷಯವೇ! ಶ್ರೀ ಬಸವಪ್ಪ ಶಾಸ್ತ್ರಿಗಳು ಗೌರಿದೇವುಡು ಶಾಸ್ತ್ರಿ, ಜವುಳಿ ಅಂಗಡಿ ತಮ್ಮಯ್ಯ, ಕೃಷ್ಣಗಿರಿ ಕೃಷ್ಣ ರಾಯರು ಕಳಲೆ ಸಂಪತ್ಕುಮಾರಾಚರ್ಯ, ಶಕುಂತಲಾಬಾಯಿ ಪಾಂಡುರಂಗ, ಎಂ.ಎನ್. ಚಂದ್ರಶೇಖರಯ್ಯ, ರಾಘವೇಂದ್ರ ರಾಯರು, ಗಂಗಮ್ಮ ಕೇಶವಮೂರ್ತಿ, ಎಂ ಆರ್ ಸತ್ಯನಾರಾಯಣ, ಎಂ ಎ ಜಯರಾಮರಾಯರು ಮುಂತಾದ ಮಹನೀಯರು, ಗಮಕ ಕಲೆ ಇಂದಿಗೂ ಉಳಿದು, ಬೆಳೆಯುತ್ತಿರುವುದಕ್ಕೆ ಕಾರಣರಾಗಿದ್ದಾರೆ.