ನೆನಪುಗಳು – ಕಮಲಾ ಬಾಲಾಜಿ

ಟೆಲಿವಿಶನ್ ಮಾಧ್ಯಮಗಳ ಗಲಾಟೆ ಇಲ್ಲದೇ ಇದ್ದ ಕಾಲ . ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಸಂಗೀತವನ್ನು ಕೇಳಬಹುದಾಗಿತ್ತು. ಅದು ಬಿಟ್ಟರೇ ರಾಮನವಮಿ ಮತ್ತು ಸಂಗೀತ ಸಭೆಗಳಲ್ಲಿ ನಡೆಯುತ್ತಿದ್ದ ಕಚೇರಿಗಳನ್ನು ಕೇಳಲು ಜನರು ಕಾಯುತ್ತಿದ್ದರು. ಆಗಿನ ಸಂಗೀತ ದಿಗ್ಗಜರುಗಳಾದ ಚೆಂಬೈ ಭಾಗವತರ್, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಜಿ ಏನ್ ಬಾಲಸುಬ್ರಮಣ್ಯಂ, ಮಧುರೈ ಮಣಿ ಅಯ್ಯರ್, ಎಂ ಎಸ್ ಸುಬ್ಬಲಕ್ಷ್ಮಿ,ಪಟ್ಟಮ್ಮಾಳ್, ಎಂ ಎಲ್ ವಸಂತಕುಮಾರಿ, ಟಿ ಆರ್ ಮಹಾಲಿಂಗಂ …. ಹೀಗೆ ದೊಡ್ಡ ದೊಡ್ಡ ವಿದ್ವಾಂಸರುಗಳ ಕಚೇರಿಯನ್ನು ಕೇಳುವ ಸದವಕಾಶ ನನ್ನದಾಗಿತ್ತು.

ಚೆಂಬೈ ಯವರ ಶಾರೀರ ಘಂಟಾ ನಾದದಂತಿರುತ್ತಿತ್ತು. ಮೈಕೇ ಬೇಡವಾಗಿತ್ತು. ಜಿ ಏನ್ ಬಿ ಯವರ ಕಲ್ಯಾಣಿ ರಾಗ; ಮಧುರೈ ಮಣಿ ಯವರ ಸ್ವರ ವಿನ್ಯಾಸ; ಅರಿಯಾಕುಡಿ ಯವರ ಕಾಂಭೋಜಿ ರಾಗದ ಶ್ರೀ ಸುಬ್ರಮಣ್ಯಾಯ ನಮಸ್ತೆ; ಎಂ ಎಸ್ ಎಸ್ ರವರ ಶಂಕರಾಭಾರಣ ರಾಗದ ಆಲಾಪನೆ ; ಪಟ್ಟಮ್ಮಾಳ್ ರವರ ಮಣಿರಂಗು ರಾಗದ ಮಾಮವ ಪಟ್ಟಾಭಿರಾಮ …….. ಮುಂತಾದುವು ಇನ್ನೂ ಕಿವಿಯಲ್ಲಿ ಮೊಳಗುತ್ತಿದೆ. ಅವರ ಸಂಗೀತವನ್ನು ಕೇಳಿದ ನಾವೇ ಧನ್ಯರು!

ಒಮ್ಮೆ ರಾಮನವಮಿಯ ಸಂಗೀತೋತ್ಸವ ಸಂದರ್ಭ! ಶೇಷಾದ್ರಿಪುರಂ ಶಾಲೆಯ ಆವರಣದಲ್ಲಿ ಎಂ ಡಿ ರಾಮನಾಥನ್ ರವರ ಗಾಯನ ಕಚೇರಿ. ಸಂಗೀತ ಕೇಳುವುದಕ್ಕೆ ಬಂದಿರುವವರು ಕೆಲವರಾದರೆ, ಮಾದುವೆ ಮುಂಜಿಗಳ ಇತ್ಯರ್ಥ …, ಗಂಡು ಹೆಣ್ಣುಗಳ ಜಾತಕಗಳ ವಿನಿಮಯ, ಬರೇ ಮಾತಾಡಲು ಬಂದಿರುವವರು ಇನ್ನೂ ಕೆಲವರು…… ಜನ ಸಂಗೀತ ಕೇಳುವುದರ ಜೊತೆಗೆ ಸ್ವಕಾರ್ಯದಲ್ಲಿ ಮುಳುಗುತ್ತಿದ್ದರು. ಎಂ ಡಿ ಆರ್ ಸಾರಮತಿ ರಾಗದ ತ್ಯಾಗರಾಜರ ಕೃತಿ ಮೋಕ್ಷಮುಗಲದಾ ಪ್ರಾರಂಭಿಸಬೇಕು ಜನರ ಗದ್ದಲ ಜಾಸ್ತಿಯಾಯಿತು. ಹಾಗೇ ಹೀಗೇ ನೋಡಿದರು. ಸದ್ದಡಗಲಿಲ್ಲ. ರಾಮನಾಥನ್ ಪಲ್ಲವಿಯಿಂದ ಪ್ರಾರಂಭಿಸದೇ, ಜೋರಾಗಿ ತಾರಾ ಸ್ಥಾಯಿಯಲ್ಲಿ ಅನುಪಲ್ಲವಿ “ಸಾಕ್ಷಾತ್ಕಾರ” ದಿಂದ ಪ್ರಾರಂಭಿಸಿದರು. ಕೂಡಲೇ ಗಲಾಟೆ ಸ್ಥಗಿತವಾಯಿತು. ಜನ ನಿಶಬ್ಧರಾಗಿ ಸಂಗೀತದತ್ತ ಗಮನ ಹರಿಸಿದರು. ಎಂ ಡಿ ಆರ್ ರವರು ಸಂಪ್ರದಾಯಸ್ಥರಾಗಿದ್ದರೂ ಕೂಡ ಸಮಯೋಚಿತವಾಗಿ ಹಾಡಿದ ರೀತಿ ನಮ್ಮನ್ನ ಮಂತ್ರಮುಗ್ದರನ್ನಾಗಿಸಿತು.

ಮತ್ತೊಂದು ದಿನ ಬೇರೊಂದು ಸಭೆಯಲ್ಲಿ ಎಂ ಡಿ ಆರ್ ರವರದ್ದೇ ಕಚೇರಿ. ಸ್ವಾರಸ್ಯವಾಗಿ ಒಂದು ರಾಗದ ಆಲಾಪನೆ ಮಾಡಿ ಕೃತಿಯನ್ನು ಆಗತಾನೇ ಪ್ರಾರಂಭಿಸಬೇಕು. ಅಷ್ಟರಲ್ಲಿ ಮೈಸೂರಿನ ವೈಣಿಕರು ದೊರೈಸ್ವಾಮಿ ಅಯ್ಯಂಗಾರ್ ರವರು ಆ ಸಭೆಗೆ ಆಗಮಿಸಿದರು. ಎಂ ಡಿ ಆರ್, ಅಯ್ಯಂಗಾರ್ಯರಿಗೆ ಕೈಮುಗಿದು, ಶ್ರೀ ರಾಗದ ತ್ಯಾಗರಾಜರ ಪಂಚರತ್ನ ಕೃತಿ ಎಂದರೋ ಮಹಾನುಭಾವುಲು ಹಾಡಲು ಪ್ರಾರಂಭಿಸಿದರು. ಅಲ್ಲಿದ್ದ ರಸಿಕರು ಒಬ್ಬರ ಮುಖ ಒಬ್ಬರು ನೋಡುವುದನ್ನು ಕಂಡು ಒಂದು ಸಣ್ಣ ನಗೆಯೊಂದಿಗೆ ಹಾಡನ್ನು ಮುಂದುವರೆಸಿದರು .


Posted

in

by

Tags:

Comments

Leave a Reply

Your email address will not be published. Required fields are marked *