ಮೈಸೂರಿನ ಚಿನ್ನರಿ ಸಂಗೀತ
ವನಮಾಲ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ಆಯೋಜಿಸಿದ್ದ ವನಮಾಲ ಮ್ಯೂಸಿಕ್ ಫೆಸ್ಟಿವಲ್ ಅಂಗವಾಗಿ 2024 ಫೆಬ್ರವರಿ 18 ರವಿವಾರದಂದು ‘ಸುಚಿತ್ರ ಸಿನಿಮ ಆಂಡ್ ಕಲ್ಚರಲ್ ಅಕಾಡಮಿ’ ಸಭಾಂಗಣದಲ್ಲಿ “ಮೈಸೂರಿನ ಚಿನ್ನರಿ ಸಂಗೀತ ” ಎಂಬ ವಿಶೇಷವಾದ ಮಕ್ಕಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದನ್ನು ಖ್ಯಾತ ಸಂಗೀತಗಾರರು, ಸಂಗೀತಜ್ಞರು ಹಾಗೂ ಮೈಸೂರು ಒಡೆಯರ ಸಂಗೀತ ಪೋಷಣೆಯ ಬಗ್ಗೆ ಬಹಳಷ್ಟು ಅಧ್ಯಯನ ನಡೆಸಿರುವ ವನಮಾಲ ಸೆಂಟರ್ ಫ಼ಾರ್ ಆರ್ಟ್ ಅಂಡ್ ಕಲ್ಚರ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀ ಡಾ ಮೀರಾ ರಾಜಾರಾಮ್ ಪ್ರಾಣೇಶ್ ರವರು ಪರಿಕಲ್ಪಿಸಿ, ನಿರ್ದೇಶಿಸಿದರು.
ಮಕ್ಕಳು ಮೈಸೂರಿನ ನಾಡಗೀತೆ ಕಾಯೌ ಶ್ರೀ ಗೌರಿ ಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮೂಡಿಬಂದ ಮುಖ್ಯ ಕಾರ್ಯಕ್ರಮ ಮೈಸೂರಿನ ಚಿನ್ನರಿ ಸಂಗೀತ, ಪ್ರೇಕ್ಷಕರ ಮನ ಸೆಳೆಯಿತು. ಮೈಸೂರಿನ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಆಸ್ಥಾನ ವಿದ್ವಾಂಸರಿಂದ ಮಕ್ಕಳಿಗಾಗಿ ರಚಿಸಿಸಿದ್ದ 8 ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಗಣಪತಿ, ಕೃಷ್ಣ ಮುಂತಾದ ದೇವರುಗಳ ಮೇಲಿನ ಹಾಡುಗಳಲ್ಲದೆ ದೇಶ ಭಕ್ತಿಯ ಮೇಲಿನ ರಚನೆಯನ್ನೂ ಆಯ್ಕೆ ಮಾಡಲಾಗಿತ್ತು. ಇದರೊಂದಿಗೆ ನಶಿಸಿ ಹೋಗಿತ್ತಿರುವ ಕೋಲಾಟ ಹಾಗೂ ಸುವ್ವಿ ಹಾಡುಗಳಿಗೆ ಮಕ್ಕಳ ನೃತ್ಯ ಸೊಗಸಾಗಿ ಮೂಡಿಬಂದಿತು. ಈ ಹಾಡುಗಳನ್ನೆಲ್ಲ ಡಾ ಮೀರಾ ರವರು 3 ತಿಂಗಳು ನಡೆಸಿದ ಕಮ್ಮಟದಲ್ಲಿ ಹೇಳಿಕೊಡಲಾಗಿತ್ತು. ಪ್ರತಿಯೊಂದು ಹಾಡಿಗೂ ಪೀಠಿಕೆಯಾಗಿ ಸೂತ್ರಧಾರರು ಮೈಸೂರು ಮಹಾರಾಜರುಗಳ ಕಥೆಗಳನ್ನು ಹೇಳುತ್ತಾ, ಆಯಾ ಹಾಡಿನ ಬಗ್ಗೆ ವಿವರಣೆ ನೀಡುತ್ತಿದ್ದರು. ಇದರೊಂದಿಗೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಸೂತ್ರಧಾರರು ಪ್ರೇಕ್ಷಕರಿಗೆ ಮನರಂಜನೆಯ ಜೊತೆ ತಿಳುವಳಿಕೆಯನ್ನು ನೀಡುತ್ತಾ ಎಲ್ಲರ ಗಮನ ಸೆಳೆದರು. ಹಿರಿಯ ಸಂಗೀತ ವಿದ್ವಾಂಸರುಗಳು ಮಕ್ಕಳಿಗೆ ವಾದ್ಯ ಸಹಕಾರ ನೀಡಿದರು. ಸಂಗೀತದಲ್ಲಿ ಡಾ. ಶಿವಶಂಕರಿ ಕಾರ್ತಿಕೇಯನ್, ನೃತ್ಯದಲ್ಲಿ ಸಿಂಧೂರ ಹಾಗೂ ನಾಗಶ್ರೀ ನಾರಾಯಣ್ ಮತ್ತು ನಾಟಕದಲ್ಲಿ ಜ್ಞಾನೇಶ್ ಶಿವಣ್ಣ ಇವರುಗಳು ತರಬೇತಿಯನ್ನು ನೀಡುವಲ್ಲಿ ನೆರವಾಗಿದ್ದರು.
ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕರಾದ ಶ್ರೀಮತಿ ಸಾಯಿಲಕ್ಷ್ಮಿ ಎಸ್, ಬ್ರಾಹ್ಮೀ ಎಜುಕೇಶನಲ್ ಹಾಗೂ ಕಲ್ಚರಲ್ ಟ್ರಸ್ಟಿನ ಸಂಸ್ಥಾಪಕ ನಿರ್ದೇಶಕರಾದ ಡಾ. ಚನ್ನರಾಜು ಮತ್ತು ಸುಬ್ರಹ್ಮಣ್ಯ ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್ಸ್ ನ ಕ್ರಿಯೇಟಿವ್ ಡೈರೆಕ್ಟರ್ ವಿದುಷಿ. ಕಾಂಚನ ಎಸ್ ಶ್ರುತಿರಂಜನಿ ರವರುಗಳು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡ ಅತಿಥಿಗಳು ಮಕ್ಕಳ ಹಾಗೂ ಅವರನ್ನು ಅಷ್ಟು ಅಚ್ಚುಕಟ್ಟಾಗಿ ತಯಾರು ಮಾಡಿದ ಮಾರ್ಗದರ್ಶಕರನ್ನು ಶ್ಲಾಘಿಸಿ, ಮಕ್ಕಳಿಗೆ ಹಿತವಚನ ನೀಡಿ ಹರಿಸಿದರು.
ಒಟ್ಟಾರೆ ಇಡೀ ಕಾರ್ಯಕ್ರಮವು ಮನರಂಜನಾಪೂರವಾಗಿ ಮೂಡಿಬಂದು, ಒಡೆಯರ ಆಳ್ವಿಕೆಯಲ್ಲಿ ರಚಿಸಲ್ಪಟ್ಟ, ತೆರೆಮರೆಯಲ್ಲಿ ಹುದುಗಿದ್ದ ಹಲವಾರು ಬಾಲಗೀತೆಗಳು ಹೊರಹೊಮ್ಮಿದುದಲ್ಲದೇ ಕನ್ನಡದ ಮಹತ್ವ ಹಾಗೂ ಅದನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವನ್ನು ಮಕ್ಕಳ ಮೂಲಕ ಪ್ರೇಕ್ಷಕರಿಗೆ ಮನಮುಟ್ಟುವಂತೆ ತಲುಪಿಸುವಲ್ಲಿ ಸಫಲವಾಯಿತು.
Report_on_Mysurina_chinnari_sangeethaDownload





































Leave a Reply